ಕರ್ಮ ಯೋಗ ಎಂದರೇನು ಮತ್ತು ಅದು ಏಕೆ ಅಗತ್ಯ?
ಸದ್ಗುರು ಕರ್ಮ ಯೋಗದ ಪ್ರಕ್ರಿಯೆಯ ಮಹತ್ವವನ್ನು, ಆಧ್ಯಾತ್ಮಿಕ ಮಾರ್ಗದಲ್ಲಿ ಅದರ ಪಾತ್ರವನ್ನು, ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಕ್ರಿಯೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತಾರೆ.

ಪ್ರಶ್ನೆ: ಸಾಧನೆಯಲ್ಲಿ ಕರ್ಮ ಯೋಗದ ಪಾತ್ರವೇನು?
ಸದ್ಗುರು: ಅದು ನಿಜವಾಗಿಯೂ ಅಗತ್ಯವಿಲ್ಲ. ಯೋಗಕ್ಕೆ ಕರ್ಮದ ಅಗತ್ಯವಿಲ್ಲ. ಯೋಗವು ಕರ್ಮವನ್ನು ಮೀರಿ ಹೋಗುವುದಾಗಿದೆ. ಕರ್ಮ ಯೋಗದ ಬಗ್ಗೆ ಏಕೆ ಹೇಳಲಾಗಿದೆ ಎಂದರೆ ವ್ಯಕ್ತಿಯಲ್ಲಿ ಸಮತೋಲನವನ್ನು ತರಲು. ನಾವು ನಮ್ಮ ಅರಿವು, ನಮ್ಮ ಪ್ರೀತಿ, ನಮ್ಮ ಅನುಭವ ಅಥವಾ ನಮ್ಮ ವಾಸ್ತವಿಕತೆಯ ನಮ್ಮ ಕಿರುನೋಟಗಳು ಎಂದು ಕರೆಯುವ ಏನಾದರೂ, ಅದು ಉಳಿಯಬೇಕಾದರೆ, ಏನೂ ಮಾಡದಿರುವ ಮಾರ್ಗವು ಬಹಳ ಅದ್ಭುತವಾದ ಮಾರ್ಗವಾಗಿದೆ, ಆದರೆ ಅದು ಬಹಳ ಇಳಿಜಾರಿನ ಮಾರ್ಗ.ಇದು ಅತಿ ಸರಳ ಮತ್ತು ಅತಿ ಕಷ್ಟಕರವಾದುದು. ಅದು ಕಷ್ಟವಲ್ಲ ಆದರೆ ಅದು ಸುಲಭವೂ ಅಲ್ಲ, ಏಕೆಂದರೆ ಅದು ಸರಳ - ಅದಿರುವುದು, ಇಲ್ಲಿ ಮತ್ತು ಈಗ. ಆದರೆ ಆ ಇಲ್ಲಿ ಮತ್ತು ಈಗಲೇ - ಅದನ್ನು ಹೇಗೆ ಪಡೆಯುವುದು? ನೀವು ಏನೇ ಮಾಡಿದರೂ, ಅದು ನಿಮ್ಮ ಕೈಯಲ್ಲಿಲ್ಲ. ಅದು ಎಂದಿಗೂ ನಿಮ್ಮ ಕೈಯಲ್ಲಿರುವುದಿಲ್ಲ. ಆದರೆ ನಿಮ್ಮ ಕೈಗಳಿಗೆ ಈಗ ಏನಾದರೂ ಬೇಕಾಗಿದೆ, ನೀವು ಏನನ್ನಾದರೂ ಹಿಡಿಯಬೇಕು. ಅದಕ್ಕಾಗಿಯೇ ಕರ್ಮ ಯೋಗದ ಊರುಗೋಲು.
ಊರುಗೋಲಿಲ್ಲದೆ, ಹೆಚ್ಚಿನ ಜನರಿಗೆ ನಡೆಯಲು ಸಾಧ್ಯವಾಗುವುದಿಲ್ಲ. ಕೆಲವು ಜೀವಿಗಳು ಮೊದಲ ಕ್ಷಣದಿಂದಲೇ ಊರುಗೋಲಿಲ್ಲದೆ ನಡೆಯಬಲ್ಲವು. ಅವರು ಬಹಳ ವಿರಳವಾದ ಜೀವಿಗಳು. ಉಳಿದ ಎಲ್ಲರಿಗೂ ಅರಿವಿನಿಂದಿರಲು ಊರುಗೋಲಿನ ಅಗತ್ಯವಿದೆ. ಇದರ ಹೊರತಾಗಿಯೂ, ಹೆಚ್ಚಿನ ಜನರು ಅರಿವಿನಲ್ಲಿ ಉಳಿಯಲು ಅಸಮರ್ಥರಾಗಿರುತ್ತಾರೆ. ಆದ್ದರಿಂದ ಕರ್ಮ ಯೋಗವನ್ನು ನಿಮ್ಮ ಜೀವನದಲ್ಲಿ ಸರಿಯಾದ ರೀತಿಯ ಕ್ರಿಯೆಯೊಂದಿಗೆ ಸಾಧನೆಯನ್ನು ಸರಿಯಾಗಿ ಮಿಶ್ರಣಗೊಳಿಸಲು ತರಲಾಗಿದೆ.
ಚಟುವಟಿಕೆ - ಮುಕ್ತಗೊಳಿಸುವುದು ಅಥವಾ ಸಿಕ್ಕಿಹಾಕುವುದು
ಕರ್ಮ ಯೋಗವನ್ನು ದುರದೃಷ್ಟವಶಾತ್ ಸೇವೆ ಎಂದು ವರ್ಣಿಸಲಾಗಿದೆ, ಆದರೆ ಅದು ಹಾಗಲ್ಲ. ಅದು ನೀವು ಸಂಗ್ರಹಿಸಿದ ಲಕ್ಷಣಗಳನ್ನು ನಿಷ್ಫಲಗೊಳಿಸುವ ಮಾರ್ಗವಾಗಿದೆ. ನೀವು ಯಾವುದೇ ಚಟುವಟಿಕೆಯಲ್ಲಿ ಸಂತೋಷದಿಂದ ತೊಡಗಿಸಿಕೊಂಡರೆ, ಅದು ಕರ್ಮ ಯೋಗ. ನೀವು ಅದನ್ನು ಹೆಚ್ಚಿನ ಪ್ರಯತ್ನದಿಂದ ಮಾಡಿದರೆ, ಕೇವಲ ಕರ್ಮ ಬರುತ್ತದೆ, ಯಾವುದೇ ಯೋಗ ಸಂಭವಿಸುವುದಿಲ್ಲ!
ಸಾಮಾನ್ಯವಾಗಿ ನೀವು ನಿರ್ವಹಿಸುವ ವಿವಿಧ ಚಟುವಟಿಕೆಗಳ ಮೂಲಕವೇ ನೀವು ಜೀವನದಲ್ಲಿ ಸಿಕ್ಕಿಕೊಳ್ಳುತ್ತೀರಿ ಮತ್ತು ಹೆಣೆದುಕೊಳ್ಳುತ್ತೀರಿ. ಆದರೆ ಚಟುವಟಿಕೆಯು ಹೆಣೆದುಕೊಳ್ಳುವ ಬದಲು ಮುಕ್ತಿಯ ಪ್ರಕ್ರಿಯೆಯಾದರೆ, ಅದು ಕರ್ಮ ಯೋಗ. ಅದು ಕೆಲಸವೇ ಆಗಿರಲಿ ಅಥವಾ ರಸ್ತೆಯಲ್ಲಿ ನಡೆಯುವುದಾಗಿರಲಿ ಅಥವಾ ಯಾರೊಂದಿಗಾದರೂ ಮಾತನಾಡುವುದಾಗಿರಲಿ, ಚಟುವಟಿಕೆಯ ಸ್ವಭಾವವು ಮುಖ್ಯವಲ್ಲ. ನೀವು ಏನನ್ನಾದರೂ ಅದು ಅಗತ್ಯವಿರುವುದರಿಂದ ಮಾತ್ರ ಮಾಡುವಾಗ, ಅದು ನಿಮಗೆ ಏನೂ ಅಲ್ಲದೇ ಇದ್ದರೂ ನೀವು ಅದು ನಿಮ್ಮ ಜೀವನವೋ ಎಂಬಂತೆ ತೊಡಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದಾಗ, ಅದು ನಿಮ್ಮನ್ನು ಪರಿವರ್ತಿಸುತ್ತದೆ ಮತ್ತು ಕ್ರಿಯೆಯು ಮುಕ್ತಿಕಾರಕವಾಗುತ್ತದೆ.
ನಾವು ಧ್ಯಾನಲಿಂಗವನ್ನು ನಿರ್ಮಿಸುತ್ತಿದ್ದಾಗ, ಜನರು ಯೋಚಿಸಿದರು, "ಇದು ಅಷ್ಟೇ! ಅವರು ಇದು ನಡೆಯಬೇಕೆಂದು ಬಯಸುತ್ತಾರೆ. ನಾವು ಇದನ್ನು ಮಾಡೋಣ! ಇದು ಮುಗಿದ ನಂತರ, ನಾವು ವಿಶ್ರಮಿಸಬಹುದು." ಅವರು ತಮ್ಮ ಜೀವನವು ಅದರ ಮೇಲೆ ಅವಲಂಬಿತವಾಗಿದೆಯೋ ಎಂಬಂತೆ ಕೆಲಸ ಮಾಡಿದರು. ಅವರು ಮನೆಯಿಂದ ಮನೆಗೆ ಹೋಗಿ, ನಿಧಿ ಸಂಗ್ರಹಿಸಿ ಮತ್ತು ಅಗತ್ಯವಾದ ಬೆಂಬಲವನ್ನು ತಂದು ಅದನ್ನು ಸಾಧಿಸಿದರು. ಅದು ಮುಗಿದ ಮೇಲೆ, ಅವರು "ಊಫ್ಫ್..." ಎನ್ನುವ ಮೊದಲೇ, ನಾನು ಹತ್ತು ವಿಭಿನ್ನ ಯೋಜನೆಗಳನ್ನು ಘೋಷಿಸಿದೆ. ನಾನು ಯಾವಾಗಲೂ ಅದನ್ನು ಮುಂದುವರೆಸುತ್ತೇನೆ ಏಕೆಂದರೆ ಜನರಿಗೆ ಆ ರೀತಿಯ ಕ್ರಿಯೆಯ ಅಗತ್ಯವಿದೆ. ಅವರು ತಮ್ಮ ಪೂರ್ಣತೆ ಮತ್ತು ಅವರ ಇಷ್ಟಾನಿಷ್ಟಗಳ ಬಗ್ಗೆ ಚಿಂತಿಸದೆ ಏನು ಅಗತ್ಯವೋ ಅದನ್ನು ಮಾಡಬೇಕಾಗಿದೆ. ಹೇಗಾದರೂ ನಾವು ನಮ್ಮ ಬೆಳವಣಿಗೆಗಾಗಿ ಏನನ್ನಾದರೂ ಮಾಡುತ್ತಿದ್ದೇವೆ, ಆದ್ದರಿಂದ ಎಲ್ಲರಿಗೂ ಉಪಯುಕ್ತವಾಗುವಂತಹದ್ದನ್ನು ಮಾಡೋಣ. ವಿವೇಕಯುಕ್ತ ಕ್ರಿಯೆಯನ್ನು ಮಾಡೋಣ.
ಸಂಪೂರ್ಣ ತೊಡಗಿಸಿಕೊಳ್ಳುವಿಕೆ
ಈ ರೀತಿಯ ಕ್ರಿಯೆಯನ್ನು ಸೃಷ್ಟಿಸಿದ ಅನೇಕ ಗುರುಗಳು ಇದ್ದರು. ಗುರ್ಡ್ಜೀಫ್ ಯುರೋಪ್ನಲ್ಲಿ ತನ್ನ ಕೇಂದ್ರಗಳನ್ನು ಪ್ರಾರಂಭಿಸಿದಾಗ, ಯುರೋಪಿನ ಶ್ರೇಷ್ಠರು ಅವನ ಬಳಿಗೆ ಹೋದರು. ಬೆಳಿಗ್ಗೆ ಅವನು ಅವರಿಗೆ ಸಲಿಕೆ ಮತ್ತು ಗುದ್ದಲಿ ನೀಡಿ, "ಕಂದಕಗಳನ್ನು ಅಗೆಯಿರಿ" ಎಂದು ಹೇಳುತ್ತಿದ್ದನು. ಬಿಸಿಲಿನಲ್ಲಿ, ಅವರು ನಿಂತು ಅಗೆದರು ಮತ್ತು ಅಗೆಯುತ್ತಲೇ ಇದ್ದರು. ಇವರು ಯಾವುದೇ ರೀತಿಯ ದುಡಿಮೆಗೆ ಹೊಂದಿಕೊಂಡವರಲ್ಲ. ಅವರು ಕೆಲವು ಗಂಟೆಗಳ ಕಾಲ ಕೆಲಸ ಮಾಡಿದ ಹೊತ್ತಿಗೆ, ಅವರಿಗೆ ಎಲ್ಲೆಡೆ ಗಾಯಗಳಾಗಿದ್ದವು. ಅವನು ಅಲ್ಲಿ ನಿಂತು ಅವರನ್ನು ಪ್ರೇರೇಪಿಸುತ್ತಿದ್ದನು. ಸಂಜೆಯ ವೇಳೆಗೆ, ಅವರು ಹಸಿವಿನಿಂದಿದ್ದರೂ ಅವರು ಕೆಲಸ ಮಾಡುತ್ತಲೇ ಇದ್ದರು, ಕಂದಕಗಳನ್ನು ಅಗೆಯುತ್ತಿದ್ದರು. ನಂತರ ಅವನು ಗಡಿಯಾರವನ್ನು ನೋಡಿದನು, "ಸರಿ, ಏಳು ಗಂಟೆಯಾಗಿದೆ. ಊಟದ ಸಮಯದಂತೆ ಕಾಣುತ್ತಿದೆ. ನಾವು ಊಟಕ್ಕೆ ಹೋಗುವ ಮೊದಲು ನೀವೆಲ್ಲರೂ ಕಂದಕಗಳನ್ನು ಮತ್ತೆ ಮುಚ್ಚಬಹುದು." ಇಡೀ ದಿನದ ಕೆಲಸ!
ನಿಮಗೆ ಮಹತ್ವಯುತವೆನಿಸದ ಕೆಲಸವನ್ನು ಸಂಪೂರ್ಣ ತೊಡಗಿಸಿಕೊಳ್ಳುವಿಕೆಯೊಂದಿಗೆ ಮಾಡುವುದು ಕರ್ಮದ ರಚನೆಯನ್ನು ಮುರಿಯುವಂತಹದ್ದಾಗಿದೆ. ಕರ್ಮ ಎಂದರೆ ಕ್ರಿಯೆ. ಕ್ರಿಯೆಯು ಯೋಗವಾಗಬೇಕಾದರೆ, ಕ್ರಿಯೆಯು ಮುಕ್ತಿಕಾರಕವಾಗಿರಬೇಕು. ನಿಮ್ಮ ಚಟುವಟಿಕೆಯು ನಿಮ್ಮನ್ನು ಬಂಧಿಸುವ ಪ್ರಕ್ರಿಯೆಯಾಗಿ ಮಾರ್ಪಟ್ಟರೆ, ಅದು ಕರ್ಮ. ಆದ್ದರಿಂದ ಪ್ರಶ್ನೆಯು ನೀವು ಎಷ್ಟು ಚಟುವಟಿಕೆಯನ್ನು ಮಾಡುತ್ತೀರಿ ಎಂಬುದರ ಬಗ್ಗೆ ಅಲ್ಲ. ನೀವು ಚಟುವಟಿಕೆಯನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬುದು ವ್ಯತ್ಯಾಸವನ್ನುಂಟುಮಾಡುತ್ತದೆ. ನೀವು ನಿಮ್ಮ ಕೆಲಸದ ಮೂಲಕ ತೆವಳಿಕೊಂಡು ಹೋಗುತ್ತಿದ್ದರೆ, ಅದು ಕರ್ಮ. ನೀವು ನಿಮ್ಮ ಕೆಲಸದ ಮೂಲಕ ನರ್ತಿಸುತ್ತಿದ್ದರೆ, ಅದು ಕರ್ಮ ಯೋಗ.
Editor’s Note: Get the latest updates from the Isha Blog. Twitter, facebook, rss or browser extensions, take your pick.