ಪ್ರಶ್ನೆ: ಸದ್ಗುರುಗಳಿಗೆ ಪ್ರಣಾಮಗಳು. ಜೀವನದಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಘಟನೆಯೂ ಕರ್ಮದಿಂದ ಆಗುವುದೇ ಅಥವಾ ಸಾಂದರ್ಭಿಕವೇ?

ಸದ್ಗುರು: ವೈಯಕ್ತಿಕ ಕರ್ಮ ಮತ್ತು ಸಾಮೂಹಿಕ ಕರ್ಮ ಎಂದು ಎರಡಿವೆ. ಕುಟುಂಬವಾಗಿ, ಸಮುದಾಯವಾಗಿ, ದೇಶವಾಗಿ, ಮಾನವಕುಲವಾಗಿ ನಾವು ಕರ್ಮದ ನೆನಪುಗಳನ್ನು ಹಂಚಿಕೊಳ್ಳುತ್ತೇವೆ. ವೈಯಕ್ತಿಕವಾಗಿ ನಾವು ಏನೂ ಮಾಡದಿದ್ದರೂ, ನಮ್ಮ ಸಮಾಜ ಕೆಲವು ಕಾರ್ಯಗಳನ್ನು ಮಾಡುತ್ತಿರುತ್ತದೆ. ಅದರಿಂದ ಪರಿಣಾಮಗಳು ಉಂಟಾಗುತ್ತವೆ. ಕರ್ಮವನ್ನು ಬಹುಮಾನ ಮತ್ತು ಶಿಕ್ಷೆಯ ವ್ಯವಸ್ಥೆ ಎಂದು ಅರ್ಥಮಾಡಿಕೊಳ್ಳಬೇಡಿ. ಅದು ಹಾಗಲ್ಲ. ಅದು ಜೀವನದ ಮೂಲ ಆಧಾರ. ನೆನಪಿಲ್ಲದೆ ಜೀವ ಇಲ್ಲ. ನೆನಪಿನ ವಸ್ತುವಿಲ್ಲದೆ ಅಮೀಬಾ ಅಥವಾ ಮನುಷ್ಯನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜೀವ ತನ್ನನ್ನು ಪುನರುತ್ಪಾದಿಸಬೇಕಾದರೆ ನೆನಪು ಬೇಕು. ಕರ್ಮ ಎಂದರೆ ಜೀವನದ ನೆನಪುಏಕಕೋಶ ಜೀವಿಯಿಂದ ಹಿಡಿದು ಎಲ್ಲ ರೂಪಗಳವರೆಗೆ ದೇಹದ ರಚನೆಯೇ ಜೀವನದ ನೆನಪಿನಿಂದ ಆಗಿದೆ.

ನಿಮ್ಮ ಸುತ್ತ ನಡೆಯುವ ಎಲ್ಲ ಕ್ರಿಯೆಗಳೂ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ.

ಸಾಮಾಜಿಕ ಅಥವಾ ಜಗತ್ತಿನ ವಾಸ್ತವತೆಗಳಿಂದ ನಿಮಗೆ ಪರಿಸ್ಥಿತಿಗಳು ಎದುರಾಗಬಹುದು. ತಾವು ಮಾಡದ ಕೆಲಸಕ್ಕಾಗಿ ಪ್ರತಿದಿನ ಸಾವಿರಾರು ಜನರು ಸಾಯುತ್ತಾರೆ. ತಮ್ಮ ಸುತ್ತ ನಡೆಯುವ ಯಾವುದಕ್ಕೂ ಸಂಬಂಧವಿಲ್ಲದೆ ಅನೇಕ ಜನರು ನೋವು ಮತ್ತು ಕಷ್ಟಗಳನ್ನು ಅನುಭವಿಸುತ್ತಾರೆ. ಆದರೆ ಅವರು ಪರಿಸ್ಥಿತಿಯಲ್ಲಿರುವುದು - ಅದು ಅವರ ಕರ್ಮ.

"ಇದು ನನ್ನ ತಪ್ಪೇ? ನಾನು ಇದನ್ನು ಮಾಡಲಿಲ್ಲ. ಇದು ನನಗೇಕೆ ಆಯಿತು?" ಎಂದು ನೀವು ಕರ್ಮವನ್ನು ನೋಡುತ್ತಿದ್ದೀರಿ. ಕರ್ಮ ಹಾಗಲ್ಲ. ಕರ್ಮ ಕೇವಲ ನೆನಪಿನ ವ್ಯವಸ್ಥೆ. ಈ ನೆನಪಿಲ್ಲದೆ ಯಾವುದೇ ರಚನೆ ಇಲ್ಲ. ಎಲ್ಲ ರಚನೆಗಳೂ ನಿರ್ಮಾಣವಾಗಿವೆ, ಮತ್ತು ವಿಶೇಷವಾಗಿ ಜೀವನದ ರಚನೆಗಳು ಮರುಕಳಿಸುವುದು ಪ್ರತಿಯೊಂದು ಜೀವದಲ್ಲೂ ಸುರಕ್ಷಿತ ನೆನಪಿನ ಶೇಖರಣೆ ಇರುವುದರಿಂದ. ನನಗೆ ನೆನಪಿಲ್ಲದ ಏನಾದರೂ ನಡೆದಿದೆ ಎಂದುಕೊಳ್ಳಿ. ಸುತ್ತಲಿನ ಸಮಾಜಕ್ಕೆ ನೆನಪಿದೆ, ಆ ಪರಿಸ್ಥಿತಿಗಳು ನಡೆಯುತ್ತವೆ. ಜಗತ್ತಿಗೆ ನೆನಪಿದೆ, ಆ ಪರಿಸ್ಥಿತಿಗಳು ನಡೆಯುತ್ತವೆ. ಮತ್ತು ನಿಮ್ಮ ಸುತ್ತ ನಡೆಯುವ ಎಲ್ಲ ಕಾರ್ಯಗಳೂ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ.

ಸಾಮೂಹಿಕ ಕರ್ಮವು ಕೆಲವು ಬಾಹ್ಯ ಪರಿಣಾಮಗಳನ್ನು ಸೃಷ್ಟಿಸಬಹುದು, ಆದರೆ ನೀವು ಜೀವನವನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದು  ಈಗಲೂ ನಿಮ್ಮಿಂದಲೇ ನಿರ್ಧರಿಸಲ್ಪಡುತ್ತದೆ.
 

ಈಗ ನ್ಯೂಯಾರ್ಕ್ ನಗರದಲ್ಲಿ ಮಾಲಿನ್ಯವಿದೆ. ಅದಕ್ಕೆ ನಾನು ಕಾರಣಕರ್ತನಲ್ಲದಿದ್ದರೂ ನಾನೂ ವಿಷದ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಇಲ್ಲಿ ನಾನು ಕಾರ್ಬನ್ ಡೈಆಕ್ಸೈಡ್ - ಬಹುಶಃ ಮೊನಾಕ್ಸೈಡ್ ಅನ್ನು ಉಸಿರಾಡುತ್ತಿದ್ದೇನೆ. ನಾನು ಯಾವುದೇ ಕರ್ಮ ಮಾಡಲಿಲ್ಲ.ನಾನು ಹಲವಾರು ಮರಗಳನ್ನು ನೆಟ್ಟಿದ್ದೇನೆ. ಏನು ಮಾಡುವುದು? ನೀವು ಒಮ್ಮೆ ನ್ಯೂಯಾರ್ಕ್ಗೆ ಬಂದ ಮೇಲೆ, ಇದನ್ನು ಉಸಿರಾಡಲೇಬೇಕು. ಹಾಗಾದರೆ ಬೆಲೆ ತೆರಬೇಕಾಗುತ್ತದೆಯೇ? ಖಂಡಿತ, ನಾನು ಇಲ್ಲಿ ಹೆಚ್ಚು ಕಾಲ ಇದ್ದರೆ, ಬೆಲೆ ತೆರಬೇಕಾಗುತ್ತದೆ.

ನಿಮ್ಮ ವೈಯಕ್ತಿಕ ಕರ್ಮ ಏನೇ ಇರಲಿ, ಸಾಮೂಹಿಕ ಕರ್ಮವೆಂಬುದೂ ಕೂಡ ಇದೆ. ನಿಮ್ಮ ಕರ್ಮ ನೀವು ಜಗತ್ತನ್ನು ಹೇಗೆ ಅನುಭವಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ, ನೀವು ಜಗತ್ತಿನಲ್ಲಿ ಎಲ್ಲಿದ್ದೀರಿ ಅಥವಾ ಏನು ಮಾಡುತ್ತಿದ್ದೀರಿ ಎಂಬುದನ್ನಲ್ಲ. ನೀವು ಅರಮನೆಯಲ್ಲಿ ಹುಟ್ಟಿರಬಹುದು ಆದರೆ ನಿಮ್ಮ ಕರ್ಮ ನಿಮಗೆ ಕಷ್ಟದ ಅನುಭವಗಳನ್ನು ಕೊಡಬಹುದು. ನೀವು ಬೀದಿಯಲ್ಲಿ ಹುಟ್ಟಿರಬಹುದು ಆದರೆ ನಿಮ್ಮ ಕರ್ಮ ನಿಮಗೆ ಸಂತೋಷಕರ ಅನುಭವಗಳನ್ನು ಕೊಡಬಹುದು. ಹಿಂದೆ ನೀವು ಮಾಡಿದ ಕರ್ಮಗಳು ಬಾಹ್ಯ ಪರಿಣಾಮ ಅಥವಾ ಪರಿಸ್ಥಿತಿಯನ್ನು ಸೃಷ್ಟಿಸಿದೆ, ಅದನ್ನು ನೀವು ತಕ್ಷಣ ನೂರು ಪ್ರತಿಶತ ಬದಲಾಯಿಸಲು ಸಾಧ್ಯವಿಲ್ಲ, ಅದಕ್ಕಾಗಿ ಶ್ರಮಪಡಬೇಕು. ಒಂದು ಪರಿಸ್ಥಿತಿಯಲ್ಲಿ ನೀವು ಮಾತ್ರವಲ್ಲ, ಅನೇಕ ವಿಷಯಗಳು ಒಳಗೊಂಡಿರುತ್ತವೆ. ಆದರೆ ನಿಮ್ಮ ಕರ್ಮವನ್ನು ತಕ್ಷಣ ಬದಲಾಯಿಸಬಹುದು.

ನೀವು ನಿಮ್ಮ ಕರ್ಮವನ್ನು ಈಗಲೇ ಬದಲಾಯಿಸಬಹುದು, ಅಂದರೆ ನೀವು ಜೀವನವನ್ನು ಹೇಗೆ ಅನುಭವಿಸುತ್ತೀರಿ ಎಂಬುದನ್ನು ಈಗಲೇ ಬದಲಾಯಿಸಬಹುದು. ಇದರಲ್ಲಿ ನೀವು ಮಾತ್ರ ಒಳಗೊಂಡಿರುವುದರಿಂದ, ನಿಮಗೆ ಇಚ್ಛೆ ಇದ್ದರೆ ಇದನ್ನು ತಕ್ಷಣ ಬದಲಾಯಿಸಬಹುದು. ಆದರೆ ನೀವು ಮತ್ತು ನಾನು ಸಿದ್ಧರಿದ್ದರೂ, ಜಗತ್ತು ಈಗ ಬದಲಾವಣೆಗೆ ಸಿದ್ಧವಿಲ್ಲದಿರಬಹುದು. ಆದ್ದರಿಂದ ಸಾಮೂಹಿಕ ಕರ್ಮ ಕೆಲವು ಬಾಹ್ಯ ಪರಿಣಾಮಗಳನ್ನು ಸೃಷ್ಟಿಸಬಹುದು, ಆದರೆ ನೀವು ಜೀವನವನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದು ಈಗಲೂ ನಿಮ್ಮ ಮೇಲೆಯೇ ನಿರ್ಧಾರವಾಗಿರುತ್ತದೆ.

Editor's Note: The "Power to Create" meditations for Peace, Love, Health, and Success (also known as "Chit Shakti") enable each one of us to become our own alchemist, by empowering us to transform long cherished desires into reality. Try them out!